ಪರಶುರಾಮ ಸೃಷ್ಟಿಯ ಸುಂದರ ನಾಡು ಎಂಬ ಅಭಿದಾನವನ್ನು ಹೊಂದಿರುವ ಜಿಲ್ಲೆ ಈ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧ ಹಿನ್ನಲೆಯುಳ್ಳ ಹಲವು ಸುಂದರ ದೇಗುಲಗಳನ್ನು ಹೊಂದಿರುವ ಚೆಲುವಿನ ನಾಡು ಈ ದಕ್ಷಿಣ ಕನ್ನಡ. ಸಂಸ್ಕೃತಿ, ಸಂಪ್ರದಾಯಗಳ ಹಿನ್ನಲೆಯೊಂದಿಗೆ ಜನಪದ ಚಟುವಟಿಕೆಗಳ ಸಮ್ಮಿಲನದೊಂದಿಗೆ ದೇವತಾರಾಧನೆ, ಭೂತಾರಾಧನೆ, ನಾಗಾರಾಧನೆ ಮೊದಲಾದ ಧಾರ್ಮಿಕ ಚಟುವಟಿಕೆಗಳಿಂದ ಶ್ರೀಮಂತಗೊಂಡಿರುವ ಹೆಮ್ಮೆ ಈ ಜಿಲ್ಲೆಯದು. ಇಂತಹ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಬಂಟ್ವಾಳ ತಾಲೂಕಿನ “ಸಜೀಪ” ಎಂಬ ಊರು ಪೌರಾಣಿಕ ಐತಿಹ್ಯ ಹೊಂದಿರುವ, ಧಾರ್ಮಿಕ ಚಟುವಟಿಕೆಗಳಿಗೆ ಬಹಳ ಹಿಂದಿನಿಂದಲೂ ಮಹತ್ವ ನೀಡಿರುವ ಸ್ಥಳವಾಗಿದೆ ಎಂಬುದು ಸತ್ಯ ವಿಚಾರವಾಗಿದೆ.
ಸುಮಾರು 800 ವರ್ಷಗಳ ಹಿಂದೆ ಈ ಊರನ್ನು ಆಳುತ್ತಿದ್ದ ನಂದಾವರದ ನಂದಾ ಅರಸರು ವೃಣ ಬಾಧೆಯಿಂದ (ಸರ್ಪಸುತ್ತು) ನರಳುತ್ತಿದ್ದರು. ವೃಣ ಬಾಧೆಯ ನಿವಾರಣಾರ್ಥವಾಗಿ ಅನೇಕ ಔಷಧೋಪಚಾರಗಳನ್ನು ಮಾಡಿದರೂ ಬಾಧೆ ಕಡಿಮೆಯಾಗದಿದ್ದಾಗ, “ವೃಣ ಬಾಧೆಯನ್ನು ಗುಣಪಡಿಸುವ ಪಂಡಿತರು ಇದ್ದರೆ ಬರಬೇಕು” ಎಂದು ಊರಗಲಕ್ಕೂ ಡಂಗುರ ಸಾರಿದರು. ಕುಂಜಾರುಗಿರಿಯ ಬ್ರಾಹ್ಮಣರೊಬ್ಬರು ಈ ವಾರ್ತೆಯನ್ನೂ ಕೇಳಿ ನಂದಾವರ ಅರಸರಿಗೆ ಔಷಧೋಪಚಾರವನ್ನು ಮಾಡಿ, “ ಈ ಔಷಧಿಯನ್ನು ಸೇವಿಸಿದಾಗ ಸರ್ಪವೊಂದು ಬಂದು ತಮ್ಮ ವೃಣದ ನಂಜನ್ನು ಹೀರುತ್ತದೆ. ಆ ಸರ್ಪವು ಸತ್ತರೆ ತಾವು ತಮ್ಮ ಆಳ್ವಿಕೆಗೆ ಒಳಪಟ್ಟ ಪ್ರದೇಶದಲ್ಲಿ ಮೂರು ಸುಬ್ರಹ್ಮಣ್ಯ ದೇವಸ್ಥಾನವನ್ನು ಕಟ್ಟಿಸಿ ಪೂಜೆ ಆರಾಧನೆಗಳನ್ನು ನಡೆಸಿಕೊಂಡು ಬರಬೇಕೆಂದು ಹೇಳಿದರು. ಅಂತೆಯೇ ಆ ಮದ್ದನ್ನು ಸೇವಿಸಿದಾಗ ಸರ್ಪವೊಂದು ಬಂದು ಅರಸನ ವೃಣದ ನಂಜನ್ನು ಹೀರಿ ನಾಗನವಳಚ್ಚಿಲು ಎಂಬಲ್ಲಿ ಪ್ರಾಣ ಬಿಟ್ಟಿತು.
ಬ್ರಾಹ್ಮಣರ ಮಾತಿನಂತೆ ಅರಸರು ತನ್ನ ಊರಿನ ಮೂರು ವಿವಿಧ ಸ್ಥಳಗಳಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಪೂಜಾದಿ ಕೈಂಕರ್ಯಗಳನ್ನು ನಡೆಸಿಕೊಂಡು ಬಂದರು. ( ಈ ಎಲ್ಲಾ ಅಂಶಗಳು ದೇವಸ್ಥಾನದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿರುತ್ತದೆ.) ವಿಷವನ್ನು ಕಾರುವ ಸರ್ಪವು ವಿಷವನ್ನು ಹೀರಿ ನಂದಾವರ ಅರಸರನ್ನು ರಕ್ಷಿಸಿದ ವಿಶಿಷ್ಟವಾದ ಸಂದರ್ಭದಲ್ಲಿ ಶ್ರೀ ದೇವರ ಸಾನ್ನಿಧ್ಯ ನೆಲೆಯಾಯಿತು ಎಂಬುದು ಉಲ್ಲೇಖನೀಯ. ಈ ಮೂರು ಸಾನ್ನಿಧ್ಯಗಳಲ್ಲಿ ಒಂದಾದ ಸಜೀಪ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನವು ಬಹಳ ಪ್ರಸಿದ್ಧವಾದ ಕ್ಷೇತ್ರವಾಗಿದೆ.
ಸುಮಾರು 35 ವರ್ಷಗಳ ಹಿಂದೆ ಎರಡು ಗ್ರಾಮಗಳ ಪ್ರಮುಖರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಅಜೀರ್ಣ ವ್ಯವಸ್ಥೆಯಲ್ಲಿದ್ದ ದೇವಾಲಯವು ಊರ ಹಾಗೂ ಪರವೂರ ಭಕ್ತರಿಗೆ ಒಂದು ಶ್ರದ್ಧಾ ಕೇಂದ್ರವಾಗಿ ಭಕ್ತಾದಿಗಳ ಇಷ್ಟಾರ್ಥವನ್ನು ನೆರವೇರಿಸುವ ಶಕ್ತಿ ಕೇಂದ್ರವಾಗಿ ಪ್ರಸಿದ್ದಿಯಾಗಿದೆ. ದೃಷ್ಟಿ ದೋಷ, ಕುಜದೋಷ, ನಾಗದೋಷ, ಬಿಳಿ ಮಚ್ಚೆಗಳಿಗೆ ಶ್ರೀ ಕ್ಷೇತ್ರದಲ್ಲಿ ಹರಕೆ ಸಲ್ಲಿಸಿ ಭಕ್ತಿಯಿಂದ ಬೇಡಿಕೊಂಡಲ್ಲಿ ದೋಷ ಪರಿಹಾರವಾಗುತ್ತದೆ. ಶ್ರೀ ಕ್ಷೇತ್ರದಲ್ಲಿ ನಾಗರ ಪಂಚಮಿ, ನವರಾತ್ರಿ ಪೂಜೆ, ವಾರ್ಷಿಕ ಷಷ್ಠಿ ಜಾತ್ರೆ, ಪ್ರತಿ ಶುಕ್ರವಾರದ ಭಜನಾ ಸೇವೆ, ಪ್ರತಿ ತಿಂಗಳ ಪಂಚಮಿಯಂದು ತಂಬಿಲ ಸೇವೆ ಮತ್ತು ಪ್ರತಿ ಹುಣ್ಣಿಮೆಯಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಹಾಗೂ ವರ್ಷಕ್ಕೆ 4 ಸಾರ್ವಜನಿಕ ಶನಿ ಪೂಜೆಯು ನಡೆಯುತ್ತಿರುತ್ತದೆ.
2017 ನೇ ಇಸವಿಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಊರ ಭಕ್ತಾಭಿಮಾನಿಗಳು ಸಭೆ ಸೇರಿ ಮುಂದಿನ ದಿನಗಳಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರನ್ನು ಬೇಟಿ ಮಾಡಿ ಅವರಿಂದ ಮಾರ್ಗದರ್ಶನ ಪಡೆದು ಅವರ ಸಲಹೆ ಮೇರೆಗೆ ವಾಸ್ತು ಶಿಲ್ಪಿ ಶ್ರೀ ಕೃಷ್ಣ ಪ್ರಸಾದ್ ಮುನಿಯಂಗಳ ಅವರನ್ನು ಸಂಪರ್ಕಿಸಿ ದೇವಸ್ಥಾನ ನವೀಕರಣಗೊಳಿಸುವ ಉದ್ದೇಶದಿಂದ ಅವರಿಂದ ಶಿಲಾಮಯ ದೇವಾಲಯದ ನೀಲಿ ನಕ್ಷೆಯನ್ನು ಸಿದ್ದಪಡಿಸಲು ಕೇಳಿಕೊಳ್ಳಲಾಯಿತು. ಅವರ ಸಲಹೆ ಮೇರೆಗೆ ವಾಸ್ತು ಪ್ರಕಾರ ನಮ್ಮ ನೂತನ ದೇವಸ್ಥಾನವನ್ನು ನವೀಕರಣಗೊಳಿಸುವುದೆಂದು ನಿರ್ಣಯಿಸಲಾಯಿತು.
ಆ ಪ್ರಕಾರ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಅತ್ಯಂತ ಸರಳ “ಆಲಯದಿಂದ ದೇವಾಲಯ” ಎಂಬ ಧ್ಯೇಯದೊಂದಿಗೆ ವಿಶೇಷ ಯೋಜನೆಯೊಂದಿಗೆ ದೇವಸ್ಥಾನದ ವತಿಯಿಂದ ನಿಧಿ ಕುಂಭ ಅಭಿಯಾನವನ್ನು ಪ್ರಾರಂಭಿಸಿರುತ್ತೇವೆ. ಸಾಧಾರಣ 10-12 ಮನೆಗೊಬ್ಬರಂತೆ, 48 ಜನರ ತಂಡವು ಸಜೀಪನಡು ಮತ್ತು ಸಜೀಪಪಡು ಗ್ರಾಮದ ಪ್ರತೀ ಹಿಂದೂ ಮನೆಯಿಂದ ದಿನಕ್ಕೆ ರೂ. ಹತ್ತರಂತೆ ಪ್ರತಿ ತಿಂಗಳು ಕನಿಷ್ಟ ರೂ.300ರಂತೆ ಸಂಗ್ರಹ ಮಾಡುತಿದ್ದು ಹೀಗೆ ಒಂದುವರೆ ವರ್ಷದಲ್ಲಿ ಅಂದಾಜು 20 ಲಕ್ಷ ರೂ ಸಂಗ್ರಹವಾಗಿದೆ.
ಶಿಲಾಮಯ ಗರ್ಭಗುಡಿಯ ಕಾಮಾಗಾರಿಯು ಪ್ರಗತಿಯಲ್ಲಿದ್ದು ದಿನಾಂಕ: 21.10.2020ರಂದು ಮಹಾಗಣಪತಿ ಗುಡಿ ಹಾಗೂ ಸುತ್ತು ಪೌಳಿಯ ಶಿಲಾನ್ಯಾಸವು ಕಲ್ಲಡ್ಕ ಡಾ| ಪ್ರಭಾಕರ ಭಟ್ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ಕಾಮಾಗಾರಿಯು ಪೂರ್ಣಗೊಳ್ಳಲು ಸಾಧಾರಣ 2 ಕೋಟಿ ರೂಪಾಯಿ ಅಗತ್ಯವಿದ್ದು ಈಗಾಗಲೇ ಊರಿನ ಹಾಗೂ ಪರವೂರಿನ ದಾನಿಗಳಿಂದ ಸಾಧಾರಣ 30 ಲಕ್ಷದಷ್ಟು ದೇಣಿಗೆ ಸಂಗ್ರಹಿಸಿರುತ್ತೇವೆ.
ಸರಕಾರದಿಂದ ರೂ.10 ಲಕ್ಷ ಬಿಡುಗಡೆಯಾಗಿದ್ದು ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಕಾಮಾಗಾರಿಯು ಪೂರ್ಣಗೊಳ್ಳಲು ಇನ್ನೂ 2 ಕೋಟಿ ರೂ ಅನುದಾನದ ಅಗತ್ಯವಿದ್ದು ಆಸ್ತಿಕ ಬಂಧುಗಳು ಊರಿನ ಹಾಗೂ ಪರವೂರಿನ ದಾನಿಗಳ ಸಹಕಾರವನ್ನು ಕೋರುತ್ತಾ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರದ ಕಾರ್ಯದಲ್ಲಿ ತಾವುಗಳು ನಮ್ಮೊಂದಿಗೆ ಕೈ ಜೋಡಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಳಕಳಿಯ ವಿನಂತಿ.